ತೆರಕಣಾಂಬಿ ಬೊಮ್ಮರಸ  : -
ಸು. 1485 ಜೈನಕವಿ. ಸನತ್ಕುಮಾರಚರಿತೆ, ಜೀವಂಧರಸಾಂಗತ್ಯ ಇವುಗಳನ್ನು ಬರೆದಿದ್ದಾನೆ. ಈತ ತೆರಕಣಾಂಬಿಯವ. ಲೀಲಾವತೀಪ್ರಬಂಧವನ್ನು ಬರೆದ ನೇಮಿಚಂದ್ರನ ಪ್ರಪೌತ್ರ, ಬೊಮ್ಮರಸೋ ಪಾಧ್ಯಾಯನ ಮಗ, ಸನತ್ಕುಮಾರಚರಿತೆಯ ಕೊನೆಯಲ್ಲಿ ಈತನ ವಿಷಯವಾಗಿ ಈ ಗದ್ಯ ದೊರೆಯುತ್ತದೆ.

ಶ್ರೀಮದಮರನರೋರಗೇಂದ್ರಪ್ರಮುಖ ಸಕಲಸುರನಮಿತಮೌಳಿಕೀಲಿತ ಮಾಣಿಕ್ಯಮಯೂಖಪುಂಜರಂಜಿತ ಪಾದಾಂಭೋಜವಿರಾಜಿತ ಶ್ರೀಮತ್ಪಾಶ್ರ್ಚಜಿನೇಂದ್ರ ಚರಣಕಮಲಮತ್ತಮಧುಕರನುಂ, ಸುಕವಿನಿಕರ ಮಾನಸೋದ್ಯಾನ ವರವಸಂತನುಂ..... ಇತ್ಯಾದ್ಯನೇಕ ಗುಣಗಣಾಲಂಕೃತನಪ್ಪ ನೇಮಿಚಂದ್ರಾನ್ವಯಗಗನ ಪ್ರಕಾಶಿತಬಾಲದಿನಕರ ಬೊಮ್ಮರಸೋಪಾಧ್ಯಾಯ ಸುಕುಮಾರ ಬೊಮ್ಮರಸವಿರಚಿತ ಸನತ್ಕುಮಾರಪ್ರಬಂಧದೊಳ್.

ಭಾಮಿನಿ ಷಟ್ಟದಿಯಲ್ಲಿ ಬರೆದಿರುವ •ಸನತ್ಕುಮಾರಚರಿತೆ 17 ಸಂಧಿಗಳಿಂದಲೂ 870 ಪದ್ಯಗಳಿಂದಲೂ ಕೂಡಿದೆ. ಹಸ್ತಿನಾಪುರದ ರಾಜ ವಿಶ್ವಸೇನನ ಮಗ ಸನತ್‍ಕುಮಾರ ರಾಜನ ಕಥೆ ಇದರ ವಸ್ತು ಪ್ರಾರಂಭದಲ್ಲಿ ಕವಿ ಪಾಶ್ರ್ವಜಿನನನ್ನು ಸ್ತುತಿಸಿ ಅನಂತರ ಸಿದ್ದಾದಿಗಳು, ಸರಸ್ವತಿ, ಪದ್ಮಾವತಿ, ಗುಣಭದ್ರಾಕಲಂಕವೀರ ಸೇನಪೂಜ್ಯಪಾದರು. ನೇಮಿಚಂದ್ರ ಇವರನ್ನು ಹೊಗಳಿದ್ದಾನೆ.
•ಜೀವಂಧರ ಸಾಂಗತ್ಯದಲ್ಲಿ 20 ಸಂಧಿಗಳೂ 1449 ಪದ್ಯಗಳು ಇವೆ. ರಾಜಪುರಿಯ ಸತ್ಯಂಧರ ರಾಜನ ಮಗನಾದ ಜೀವಂಧರ ರಾಜ ಸಂಸಾರಸುಖ ಸ್ಥಿರವಲ್ಲವೆಂದು ಜಿನದೀಕ್ಷೆ ವಹಿಸಿ ಸಕಲ ಕರ್ಮಗಳ ಹೇಸಿ ಮುಕ್ತಿಯನೈದಿದುದೇ ಈ ಕಾವ್ಯದ ವಸ್ತು, ಬುಧಜನಮುಕುರ, ರಸಿಕಕರ್ಣಭೂಷಣ, ವೀರರ ವಿಜಯದ ನೆಲೆ ಜಾಣರ ಮನದಚ್ಚು ಮುಂತಾದ ಮಾತುಗಳಿಂದ ಈ ಗ್ರಂಥದ ಉತ್ಕ್ರಷ್ಟತೆಯನ್ನು ಕವಿ ಹೇಳಿಕೊಂಡಿದ್ದಾನೆ.								(ಟಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ